ನಾನೊಬ್ಬ ಪೊಲೀಸ್ ಕಾನ್ಸ್ ಟೇಬಲ್, ಆದರೆ..!?!

ಮಲಗಿದ್ದ ಮಗು ನಡುರಾತ್ರಿಯಲ್ಲೇ ಬೆಚ್ಚಿಬಿದ್ದು ಚಿರ್ರನೆ ಚೀರಿ ಪಕ್ಕದಲ್ಲೇ ಮಲಗಿದ್ದ ಅಮ್ಮನನ್ನ ನೋಡಿ, ಅಮ್ಮಾ ಅಮ್ಮಾ ನನ್ಗೆ ನನ್ನ ಅಪ್ಪ ಬೇಕು ಈಗ ಅವ್ರು ಎಲ್ಲಿದ್ದಾರೆ.? ಕೊರೋನಾ ಜೊತೆ ಹೊಡೆದಾಡೋಕೆ ಹೋಗಿ ಮತ್ತೆ ಮನೆಗೆ ಬರ್ತಾರಾ.? ನಾನು ನನ್ನಪ್ಪನ ಎದೆಮೇಲೆ ಮಲಗಿ ಅಪ್ಪ ಎಲ್ಲೂ ಹೋಗ್ಬೇಡಪ್ಪ ನಿನ್ನ ಉಸಿರಿಗಿಂತ ಯಾವ ಕೆಲಸಾನೂ ಹೆಚ್ಚಲ್ಲಪ್ಪಾ ಅಂತ ಬಾಚಿ ತಬ್ಬಿಕೊಳ್ಳಬೇಕು ಅನ್ನಿಸ್ತಿದೆ. ಅಪ್ಪಂಗೆ ಹೇಳು ಪೊಲೀಸ್ ಕೆಲ್ಸ ಬೇಡ ನನ್ನನ್ನ ಮುದ್ದಾಡಿಕೊಂಡು ಒಂದರೆಗಳಿಗೆ ನನ್ನ ಜೊತೆ ಇದ್ರೆ ಅದೇ ನನಗೆ ಆಟ-ಊಟ-ಪಾಠ ಎಲ್ಲವೂ. ಅಪ್ಪನ ನೆನಪಾಗ್ತಿದೆ ಫೋನ್ ಮಾಡಿ ಕೊಡಮ್ಮಾ ಅವರ ಮಾತು ಕೇಳ್ಬೇಕು ಅಂತ ಅನ್ನಿಸ್ತಿದೆ. ನನ್ನಪ್ಪ ಬರದೇ ಹೋದ್ರೆ ನಾನು ಹುಚ್ಚಿಯಾಗೋಗ್ತಿನಮ್ಮಾ ಅನ್ನೋ ಚಿಕ್ಕ ಮಗುವಿನ ಬಾಯಿಯಲ್ಲಿ ಅದೆಷ್ಟೋ ಮಾತುಗಳು ಬಂದು ಕಣ್ಣೀರಲ್ಲೇ ಕೊರಗಿ ದಿನಂಪ್ರತಿ‌ ಮರುಗಿ ಕಳೆದೋಗಿದೆ.
ಇನ್ನು ಗಂಡ ಗಸ್ತು ತಿರುಗಿ ನಮ್ಮ ನಾಡಿಗೆ ಬಂದಿರೋ ಗಂಡಾತರವನ್ನ ತನ್ನ ಗುಂಡಿಗೆಯನ್ನೇ ಪಣಕ್ಕಿಟ್ಟು ಹೋರಾಡ್ತಾನೆ ಬಿಡಮ್ಮಾ ಅನ್ನೋ ಗಂಟಲುಕಟ್ಟಿದ ಧ್ವನಿಯಲ್ಲೇ ಎದೆಯಲ್ಲಿ ನುಂಗಲಾರದ ನೋವಿನಲ್ಲೇ ದಿನಕಳೆಯೋ ಅದೆಷ್ಟೋ ಹೆಣ್ಣುಮಕ್ಕಳೂ ಇದ್ದಾರೆ. ಆದರೆ, ನೂರಾಸೆಯ ಹೊತ್ತ ಹೆಣ್ಣಿನ ನೋವಿನ ಹುಣ್ಣ ಗುಣಪಡಿಸೋ ಕೆಲಸವನ್ನ ಅದ್ಯಾಕೆ ಪೊಲೀಸ್ ಇಲಾಖೆ ಮಾಡ್ತಿಲ್ಲ ಅನ್ನೋದೇ ನೋವಿನ‌ ಸಂಗತಿ.

ಲವ್ ಸ್ಟೇಟಸ್ | ಪ್ರೀತಿಯ ಕವನಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇನ್ನು ಗಂಡನನ್ನ ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡು ಪೊಲೀಸ್ ಕೆಲಸಕ್ಕೆ ಸೇರಿಕೊಂಡ‌ ಮಗನ ಆರೈಕೆಯಲ್ಲೇ ಸವೆದು ಹಾಸಿಗೆ ಹಿಡಿದ ತಾಯಿಯ ನೋವೇ ಇನ್ನೊಂದುತರ. ಮಗ ಮುಂಜಾನೆಯೇ ಕೆಲಸಕ್ಕಂತ ಎದ್ದು ಹೊರಡೋ‌ ಸಮಯದಲ್ಲಿ ತಾಯಿಗೆ ಎರಡೊತ್ತಿಗಾಗೋ ಆಹಾರವನ್ನ‌ ಸಿದ್ಧಪಡಿಸಿ ಹೋಗ್ತಾನೆ. ಆಯಾಯ ಸಮಯಕ್ಕೆ ಯಾವ್ಯಾವ ಮಾತ್ರೆಗಳು ಬೇಕೋ ಆ ಮಾತ್ರೆಗಳನ್ನೆಲ್ಲಾ ತಾಯಿಯ ತಲೆದಿಂಬಿನ ಮೇಲಿಟ್ಟು ಅವ್ವಾ ಹೋಗಿ ಬರ್ತೀನಿ ಅಂತ ಮನೆ ಬಾಗಿಲ‌ ಕಡೆ ಮುಖ‌ ಮಾಡ್ತಿದ್ದಂತೆ ಆತನ‌ ಕಣ್ಣಾಲೆಗಳು ಒದ್ದೆಯಾಗಿ ಉಫ್ ಅನ್ನೋ ಉಸಿರೂ ಕೂಡ ಬಂದೋಗಿದ್ದು ಇಂದು ನಿನ್ನೆಯದಲ್ಲ. ಹೆತ್ತು ಹೊತ್ತು ಸಾಕಿದ ಮಗನ ಬೆನ್ನ ದರ್ಶನದಲ್ಲೇ ಬಳಲಿ ಬೆಂಡಾದ ತಾಯಿ ಮಾತ್ರೆ ಇಲ್ಲದೇ ಹೋದ್ರೂ ಇರ್ತಿತ್ತು, ಆದರೆ ನಾನಾಡಿಸಿ‌ ಸೆರಗಲ್ಲಿ ಬಚ್ಚಿಟ್ಟಿದ್ದ ಮಗನ ಕಾಲಿನ ಮೇಲೆ ಮಲಗಿ ಅವನ ಮುಖ ನೋಡಿದ್ರೆ ಯಮಧರ್ಮ ಇಲ್ಲೇ ಬಂದ್ರು ಖುಷಿಯಾಗಿಯೇ ಪ್ರಾಣಬಿಟ್ತಿದ್ದೆ ಅನ್ನೋ ತಾಳಿ ಕರುಳೂ ಇದೆ. ಮಲಗಿದ್ದಲ್ಲೇ ಹಾಸಿಗೆಯ ಕ್ರೌರ್ಯಕ್ಕೆ ಬೆನ್ನಿನಲ್ಲಿ ಹುಣ್ಣಾಗಿಸಿಕೊಂಡು ಮಗನ ಬರುವಿಕೆಗಾಗಿ ಕಾಯೋ ತಾಯಿಯ ನರಳಾಟ ಅದ್ಯಾಕೆ ಪೊಲೀಸ್ ಇಲಾಖೆಗೆ ಕೇಳಿಸ್ತಿಲ್ಲ.?

Love Story : ನವಿಲೂರಿನ ಗದ್ದೆಯ ಅಂಚಿನಲ್ಲಿ ಪ್ರತಿದಿನವೂ ಬೆಳದಿಂಗಳ ಹಾಲ್ಗೆನೆಯ ಸುಂದರಿ ರಮ್ಯಾ
ಇನ್ನು, ಹೆಗಲ‌ ಮೇಲೆ‌ ಮಗನನ್ನ ಹೊತ್ತು ಮೆರೆಸಿದ ತಂದೆ ಕೂಡ ಪೊಲೀಸ್ ಕೆಲಸಕ್ಕೆ ಸೇರಿದ ಮಗನನ್ನ ಕಾಣದೇ ಚಡಪಡಿಸೋ ನಿಸ್ತೇಜವಾದ ಕೈ-ಕಾಲುಗಳೂ ಕಣ್ಣೀರಿನ ಹನಿಗಳಲ್ಲೇ ತೊಯ್ದು ಹೋಗಿದ್ದುಂಟು. ಕಣ್ಣಲ್ಲಿ ನೀರು ಸುರಿಸಿದ್ರೆ ಮಗ ಕುಸಿದೋಗ್ಬಿಡ್ತಾನೆ ಅಂತ ಗಟ್ಟಿಯಾಗಿ ಗಂಟಲು ಬಿಗಿಹಿಡಿದು ಸೊರಗೋದ ಮುಖದಲ್ಲೂ ಮಗನ ಮಂದಹಾಸವನ್ನ ಬಯಸುವ ಜೀವ ಅದು ತಂದೆಯದ್ದೇ ಹೊರತು ಬೇರ್ಯಾರದ್ದೂ ಅಲ್ಲ.
ಮೇಘದತ್ತನು ಇಷ್ಟೆಲ್ಲಾ ನೋವಿನ ವಿಚಾರವನ್ನ ಪ್ರಸ್ತಾಪ ಪಡಿಸುತ್ತಿರೋ ಉದ್ದೇಶ ಇಷ್ಟೇ. ಉನ್ನತ ಶಿಕ್ಷಣವನ್ನ ಪಡೆದು ಕೈಯಲ್ಲಿ ನಾನಾ ಬಗೆಯ ಸ್ನಾತಕೋತ್ತರ ಪದವಿಯ ಸರ್ಟಿಫಿಕೇಟನ್ನ ಪಡೆದು ಕೊನೆಗೆ ಬಡತನದ ರೇಖೆಯಲ್ಲೇ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಯನ್ನ ಅಲಂಕಿರಿಸೋ ಅತಿರಥ ಮಹಾರಥರು ಬದುಕಿನ ಕಾಲುಮುರಿಸಿಕೊಂಡು ಕುಳಿತಿದ್ದಾರೆ. ಸಾವಿರ ಸಾವಿರದಷ್ಟು ಆಯ್ಕೆಯಾದ ಕಾನ್ಸ್ ಟೇಬಲ್ ಗಳು ಮನೆಯ ಗೋಡೆಯ ಮೇಲೆ ತೂಗಾಡುತ್ತಿರೋ ಚಿಮಣಿ(ಎಣ್ಣೆ ಬತ್ತಿಯ ದೀಪ) ಯ ಜಾಗಕ್ಕೆ ಬಲ್ಬ್ ಹಾಕಿಸೋವಷ್ಟಾದರೂ ಹಣ ಸಂಬಳದ ರೂಪದಲ್ಲಿ ಸಿಗ್ತಿದೆಯಲ್ಲಾ ಅನ್ನೋ ಖುಷಿಯ ನೋವನ್ನ ಕಂಡವರು ಅದೆಷ್ಟೋ ಪೊಲೀಸ್ ಸಿಬ್ಬಂದಿ ಇದ್ದಾರೆ. ಅವ್ವ-ಅಪ್ಪನ ಮಾಸಿಹೋದ ಶರ್ಟು-ಸೀರೆಗಳನ್ನೇ ಕಾಣದೇ ತೂಗಿಹಾಕಿದ ಫೋಟೋಗೇ ಫ್ರೇಮೇ ಹಾಕಿಸಲಾಗದೇ ಕನವರಿಸಿ ಅವರಿವರ ಮನೆಯ ತಂಗಳೂಟದಲ್ಲೇ ಅರೆಹೊಟ್ಟೆತುಂಬಿಕೊಂಡು ಕಷ್ಟದಲ್ಲೇ ಪೊಲೀಸ್ ಇಲಾಖೆ ಸೇರಿಕೊಂಡವರು ಸಾವಿರ ಸಂಖ್ಯೆಯಲ್ಲಿದ್ದಾರೆ.

ನಾ ಕಂಡ ಪ್ರೀತಿ ಸುಂದರ ಹೂದೋಟ…. | Best Love Quotes in kannada
ಹೀಗೆ ನೋವಿನಲ್ಲೇ ಬದುಕ‌ ಬಂಡಿಯನ್ನ ತಳ್ಳುತ್ತಾ ಹೊರಜಗತ್ತಿಗೆ ತಾನೊಬ್ಬ ಸುಖಪುರುಷ ಅನ್ನೋ ಹಣೆಪಟ್ಟಿಯನ್ನ‌ ಹೊತ್ತು ದಿನಕಳೆಯಿತ್ತಿರುವ ಪೊಲೀಸ್ ಸಿಬ್ಬಂದಿಯ ನೋವು ಯಾರಿಗೂ ಬೇಡಬಿಡಿ. ಆರೋಗ್ಯ‌ ಭಾಗ್ಯ ಅನ್ನೋ ಒಂದೇ ಒಂದು ಬೆನಿಫಿಟ್ಟನ್ನ ಹೊಂದಿರೋ ಪೊಲೀಸ್ ಇಲಾಖೆ ಕೆಲವೊಂದು ಬಾರಿ ಆ ಒಂದು ಯೋಜನೆಯಡಿಯಲ್ಲಿ ಆಸ್ಪತ್ರೆಯ ಬೆಡ್ಡನ್ನ ಪಡೆಯೋಕೂ ನರಳಾಡಿರೋ ಸಂಗತಿಗಳೂ ಸಾಕಷ್ಟಿದ್ದಾವೆ. ಇಷ್ಟು‌ ದಿನ ಹಗಲು ರಾತ್ರಿ ಎನ್ನದೇ ಕೆಲಸವನ್ನ ಮಾಡ್ತಿದ್ದ ಪೊಲೀಸ್ ಸಿಬ್ಬಂದಿ ಇದೀಗ ಕೊರೋನಾದ ಕಪಿಮುಷ್ಟಿಯಲ್ಲಿ ನರಳಾಡಿ ನರಕವನ್ನೇ ದಿನಂಪ್ರತಿ‌ ನೋಡುವ ಕಾಯಕವನ್ನ ಮಾಡ್ತಿದ್ದಾರೆ. ಕೊರೋನಾ ರೋಗಿಯೊಬ್ಬನ ಪ್ರೈಮರಿ,ಸೆಕೆಂಡರಿ ಕಾಂಟ್ಯಾಕ್ಟ್ ಗಳನ್ನ ಹುಡುಕಾಡಿ ಅವರನ್ನ ಬಲವಂತವಾಗಿ ಆಸ್ಪತ್ರೆಗೆ ಕರೆದೊಯ್ಯೋ ಕೆಲಸವನ್ನ ಕೆಳಹಂತದ ಪೊಲೀಸರು ಮಾಡ್ತಿದ್ದಾರೆ. ಈ ವೇಳೆ‌ ಸುರಕ್ಷತೆಗೆ ಕಿಟ್ ಗಳನ್ನ ಕೂಡ ಪೊಲೀಸ್ ಇಲಾಖೆ ನೀಡದೇ ಸಾಕಷ್ಟು ಸಮಸ್ಯೆಗಳಲ್ಲಿ ಪೊಲೀಸ್ ಸಿಬ್ಬಂದಿ ಬಳಲುವಂತೆ ಮಾಡಿದೆ.

Love Story : ಮದುವೆ ದಿನ ಹತ್ತಿರ ಬರ್ತಿದ್ದಂತೆ ಅದಿತಿಗೆ ಮನಸ್ಸು ಭಾರ….
ಕೊರೋನಾ‌ ಬಂದು ಇಡೀ ಠಾಣೆಗೆ ಠಾಣೆಯೇ ಸೀಲ್ ಡೌನ್ ಆದ್ರೂ ಕೂಡ ಕೆಲ ಹಿರಿಯ ಅಧಿಕಾರಿಗಳು ಕ್ವಾರಂಟೈನ್ ಆದ್ರೂ ಡ್ಯುಟಿ ಮಾಡಿ ಅನ್ನೋ ಮೃಗೀಯ ವರ್ತನೆಯನ್ನ‌ ತೋರ್ತಿದ್ದಾರೆ. ಪುಸ್ತಕದ ಬದನೆಕಾಯಿ ಇನ್ನೊಬ್ಬರ ಕಷ್ಟವನ್ನ ಹೇಳಲ್ಲ ಸ್ವಾಮಿ ಕೇವಲ ಸೆಲೆಕ್ಷನ್ನಿನ ಸೂತ್ರವನ್ನ ಮಾತ್ರ ತೋರಿಸಿಕೊಡುತ್ತೆ. ನಾವು ಈ ಜಗತ್ತಲ್ಲಿ ಹೇಗೆ ಬದುಕಬೇಕು..?‌ ಕೆಳ ಹಂತದ ಸಿಬ್ಬಂದಿಯ ನೋವು ನಲಿವೇನು..? ಅವರ ಪುಟ್ಟ ಪುಟ್ಟ ಮಕ್ಕಳ ನರಳಾಟವೇನು..? ತಾನೊಬ್ಬನೇ ಹೆಂಡತಿ-ಮಕ್ಕಳ ಜೊತೆ ಥಿಯೇಟರ್,ಪಾರ್ಕು ‌ಓಡಾಡಿಕೊಂಡಿದ್ರೆ ನನ್ನ ಕೆಳಗಿರೋ ಸಿಬ್ಬಂದಿ ನನ್ನಂತೆಯೇ ಅಲ್ಲವಾ..? ಬ್ರಿಟೀಷರು ಹೋಗೋವಾಗ ನಮ್ಮನ್ನ ಇಲ್ಲೇ ಬಿಟ್ಟು ಹೋಗಿದ್ದಾರೆ ಅದಕ್ಕಾಗಿ ಎಲ್ಲರನ್ನ ಗುಲಾಮರಾಗಿ‌ ಇಟ್ಟುಕೊಂಡಿದ್ದೇವೆ ಅನ್ನೋದನ್ನ ರೂಢಿಸಿಕೊಂಡಿದ್ರೆ ಇಂದಿಗೇ ಅದನ್ನ ಬಿಟ್ಟು ಬಿಡಿ. ನೀವಾಗಲಿ-ನಾವಾಗಲಿ ಬದುಕೋದು ಬೆರಳೆಣಿಕೆಯ ದಿನವಷ್ಟೇ ಕೆಲವರು ನರಳಿ ಮರೆಯಾದ್ರೆ, ಇನ್ನೂ ಕೆಲವರು ನಗುನಗುತ್ತಾ‌ ಮರೆಯಾಗ್ತಾರೆ ಅದೆಲ್ಲವೂ ವಿಧಿಲಿಖಿತವಷ್ಟೇ.

BMTC ಕಂಡಕ್ಟರ್ ‘ಕೊರೋನಾ ಜಾಗೃತಿ’ ಹಾಡಿಗೆ ಕಳೆದೋಗ್ತೀರಿ ..!
ದಯಮಾಡಿ,‌ ಮೇಘದತ್ತನ‌ ಕಳಕಳಿಯ ವಿನಂತಿಯಿದು ನೀವು ಬದುಕಿ ಉಳಿದವರನ್ನ ಬದುಕೋಕೆ ಬಿಡಿ. ಇಪ್ಪತ್ತೈದು ವರ್ಷಕ್ಕೆ ಇಲಾಖೆ ಸೇರಿ ನಲವತ್ತು ವರ್ಷಕ್ಕೆ ಖಾಯಿಲೆಯ ಗೂಡಾಗೋ ಕಾನ್ಸ್ ಟೇಬಲ್ ಗಳ ಕರುಣಾಜನಕ ಕತೆಗಳನ್ನ ದಯಮಾಡಿ ಅರಿತು ಮುನ್ನೆಡೆಯಿರಿ. ಹಗಲಿರುಳು ದುಡಿದು ಸಂಸಾರದ ನಲಿವನ್ನೇ ನೋಡೋಕಾಗದ ಜೀವನ ಇದ್ದರೆಷ್ಟು,ಇಲ್ಲದಿದ್ದರೆಷ್ಟು. ಇನ್ನಾದ್ರು ಕಾನ್ಸ್ ಟೇಬಲ್ ಗಳ ಮುಖ ನೋಡಿ ಮಣೆಹಾಕೋದಕ್ಕಿಂತ ಅವರ ನಗುವಿಲ್ಲದ ಮನೆಯವರ ಮುಖವನ್ನಾದ್ರೂ ನೋಡಿ ಸ್ವಲ್ಪ ಪ್ರೀತಿಯ ರಸಧಾರೆಯನ್ನ ಸವಿಯಲು ಬಿಡಿ. ಕಾನ್ಸ್ ಟೇಬಲ್ ಗಳಿಗೂ ಒಂದು‌ ಹೃದಯವಿದೆ ದಯಮಾಡಿ ಹಳಿದು, ಉರಿದು ನೋವತರದಿರಿ‌ ಹೇ ಬುದ್ದಿವಂತರೇ.

ದತ್ತರಾಜ್ ಪಡುಕೋಣೆ

Kannada Kavanagalu | Preetiya Kavana – #06

Kannada Kavanagalu | Preetiya Kavana – #02

Kannada Kavanagalu | Preetiya Kavana – #01

Kannada Nudimuttugalu – Ver.03

Nimagu Ee Blog Nalli Post Maadabekemba Aasey iddare

Love stories, Nimma Kavana, Nudimuttugalanna

email maadi – kannadanewslive01@gmail.com

Similar Articles

Top
error: Content is protected !!