ನವಿಲೂರಿನ ಗದ್ದೆಯ ಅಂಚಿನಲ್ಲಿ ಪ್ರತಿದಿನವೂ ಬೆಳದಿಂಗಳ ಹಾಲ್ಗೆನೆಯ ಸುಂದರಿ ರಮ್ಯಾ….

ನವಿಲೂರಿನ ಗದ್ದೆಯ ಅಂಚಿನಲ್ಲಿ ಪ್ರತಿದಿನವೂ ಬೆಳದಿಂಗಳ ಹಾಲ್ಗೆನೆಯ ಸುಂದರಿ ರಮ್ಯಾ ಹಾದೋಗುತ್ತಿದ್ದಳು. ಅಂಚಿಗಂಟಿದ ಹುಲ್ಲು ಅವಳ ಕಾಲ ಗೆಜ್ಜೆಯ ನಾದಕ್ಕೆ ಮಂಜಿನ ಹನಿಯ ತಾಕಿಸಿ‌ ಪುಳಕಗೊಳ್ಳುತ್ತಿದ್ದವು. ಆ ಗದ್ದೆಯ ಮಗ್ಗಲಿನಲ್ಲೇ ಚಿಕ್ಕದೊಂದು ಮನೆಯ‌ ತಟ್ಟಿ(ಮಳೆಹನಿಗಳು ಬೀಳದಂತೆ ಮನೆಯ ಜಗಲಿಯ ಮುಂದೆ ತೆಂಗಿನ ಗರಿಯ ತಡೆಗೋಡೆ) ಯ ಒಳಗಿಂದ ಮುಂಜಾವಿನ ಸೂರ್ಯ ಮೂಡದೇ ಹೋದರೂ ತಟ್ಟಿಯ ಕಿಂಡಿಯ ಒಳಗೊಂದು ಕಣ್ಣೊಂದು ಪ್ರತಿನಿತ್ಯವೂ ಮೂಡುತ್ತಿತ್ತು. ಆ ಕಳ್ಳಕಣ್ಣಿನ ಒಡೆಯನ ಹೆಸರೇ ಮನೋಹರ. ಆಗಷ್ಟೇ ಕಾಲೇಜು ಮುಗಿಸಿ ಗ್ಯಾರೇಜಿನ ನಟ್ಟು ಬೋಲ್ಟಿನ ಸಂಗವನ್ನ ಬೆಳೆಸಿ ಹೊಟ್ಟೆಗೊಂದಿಷ್ಟು ಗಳಿಸುವ ಕೆಲಸವನ್ನ ಮನೋಹರ ಅಚ್ಚುಕಟ್ಟಾಗಿ ಮಾಡ್ತಿದ್ದ. ಆದರೆ, ಬೆಳಿಗ್ಗೆಯ 8 ಗಂಟೆ, ಸಂಜೆಯ 5 ಗಂಟೆಯಾಯ್ತಂದ್ರೆ ಸಾಕು ಮನೋಹರ ಅದೆಂತಹ ಮಹತ್ತರವಾದ ಕೆಲಸವಿದ್ದರೂ ಅದೆಲ್ಲವನ್ನ ಬಿಟ್ಟು ಮನೆಯ ತಟ್ಟಿಯ ಕಿಂಡಿಯಲ್ಲೇ ಮುಳುಗೇಳೋ ಕೆಲಸವನ್ನ ಮಾಡ್ತಿದ್ದ. ರಮ್ಯಾ ನಡೆದೋದ ಜಾಗದಿ ಕೂತು ಮಾತಿಲ್ಲದೇ ಪ್ರೇಮಕಾವ್ಯವನ್ನ ತನ್ನುಸಿರಲ್ಲೇ ಹೇಳಿ ಕುಮಾರವ್ಯಾಸನನ್ನೇ ಮೀರಿಸೋ ಕೆಲಸವನ್ನ ಆಗಿಂದಾಗೇ ಮಾಡಿ ಮನೋಹರ ಮುಗುಳ್ನಗುತ್ತಿದ್ದ. ರಮ್ಯಾ ತಾನಾಯ್ತು ತನ್ನ ಕಾಲೇಜಿನ ಬ್ಯಾಗಾಯ್ತು ಅಂತ ತಲೆತಗ್ಗಿಸಿಯೇ ನಡೆದೋಗುವ ಅವಳಂದ ಚಂದ ಕೆಂದಾವರೆಯನ್ನೇ ನಾಚಿ ನೀರಾಗಿಸುವಂತಿತ್ತು. ಹೀಗೆ ದಿನಗಳು‌ ಉರುಳಿದವು ಮನೋಹರ ತಟ್ಟಿಯ ತಕರಾರಿನಲ್ಲೇ ಕಣ್ಣಿನಲ್ಲೇ ರಮ್ಯಾಳ ಪ್ರೇಮಪಾಶಕ್ಕೆ ಬಿದ್ದು ಪ್ರೇಮರೋಗಿಯ ಪಟ್ಟವನ್ನ ಹೊತ್ತುಕುಂತಿದ್ದ. ಅದೇನಾಯ್ತೋ ಗೊತ್ತಿಲ್ಲ ಮನೋಹರ ಕಿಂಡಿಯಲ್ಲಿ ಪ್ರೇಮನಿವೇದನೆ ಮಾಡಿದರೆ ಮಂಡಿನೋವು ಬರುತ್ತೆ ಹೊರತು ರಮ್ಯಾಳ ಪ್ರೀತಿಯ ಪುಟಕ್ಕೆ ತನ್ನೆಸರು ಮೆತ್ತೋದಿಲ್ಲ‌ ಅನ್ನೋ ಅರಿವಾಗಿ ತಟ್ಟಿಯ ಅಂಚಿನಿಂದ, ಪ್ರೀತಿ ಗದ್ದೆಯ ಅಂಚಿಗೆ ಬಂದು ತಲುಪಿತ್ತು. ರಮ್ಯಾ ಗದ್ದೆಯ ಅಂಚಿನಿಂದ ನಡೆದೋಗುತ್ತಿದ್ದರೆ ಮನೋಹರ ಐವತ್ತು ಅಡಿ‌ ಅಂತರದಲ್ಲೇ ನಡೆಯುತ್ತಾ ಅವಳೋದ ಜಾಗದ ತುಂಬೆಲ್ಲಾ ಜಾತ್ರೆಯ ಮೆರುಗನ್ನ ಕಾಣ್ತಿದ್ದ.

ಲವ್ ಸ್ಟೇಟಸ್ | ಪ್ರೀತಿಯ ಕವನಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಮನೋಹರ ಕೈಯಲ್ಲೊಂದು ಫೋನಿಡಿದು ಸುತ್ತಾಡಿದ ದಿನವೆಲ್ಲಾ ಫೋನಿನ ಬ್ಯಾಟರಿ ಖಾಲಿಯಾಯ್ತೇ ಹೊರತು ರಮ್ಯಾಳ‌ ಫೋನ್ ನಂಬರ್ ಮಾತ್ರ ಸಿಕ್ಕಿರಲಿಲ್ಲ. ಮಾತಾಡಲೇ-ಮುದ್ದಾಡಲೇ ಎಂಬ ಎದೆಬಡಿತದ ಮಾತು ಕೇಳಿಯೇ ಹೊಟ್ಟೆಯಲ್ಲಿ ಚಿಟ್ಟೆ ಬಿಟ್ಟವರಂತೆ ಹೆದರಿ‌ ಮಾರುದೂರ ಹೋಗಿ ಮೌನದಲೇ ಪ್ರೇಮಪತ್ರವನ್ನ ತನ್ನೆದೆಗೆ ಎಸೆದು ನಿರಾಸೆಯಲ್ಲೇ ಹಿಂತಿರುತ್ತಿದ್ದ. ಅದೆಷ್ಟೋ ಬಾರಿ ರಮ್ಯಳಿಗಾಗಿ ಬರೆದ ಪತ್ರಗಳು ಮನೆಯ ಕೋಣೆಯಲ್ಲೇ ಮರುಗಿ ಕೊನೆಗೊಂದು ದಿನ ಒಲೆಗೆ ಉರುವಲಾಗಿ ಹೋಗಿದ್ದೂ ಇದೆ. ಬಚ್ಚಲ ಮನೆಯಲ್ಲೇ ಕೂತು ರಮ್ಯಾಷ್ಟೋತ್ತರವನ್ನ ಜಪಿಸಿ ಮುಗುಳ್ನಕ್ಕಾಗ ಬಚ್ಚಲ ಗೋಡೆಯೇ ಅದೆಷ್ಟೋ ಬಾರಿ ಕಣ್ಣೀರಿಟ್ಟಿತ್ತು. ಚಾಪೆಯ ಮೇಲೆ ಮಲಗಿ ಫ್ಯಾನಿನ ರೆಕ್ಕೆಯಲ್ಲೇ ಪ್ರೇಮತರಂಗವನ್ನ ಸುತ್ತಿ ಕತ್ತಲಾಗಿದ್ದೂ ಇದೆ ಬೆಳಕು ಹರಿದದ್ದೂ ಇದೆ.
ಒಂದಿನ‌ ಮನೋಹರ ಅದೇನೇ ಆಗಲಿ ರಮ್ಯಾಳಿಗೆ ತನ್ನ ಪ್ರೀತಿಯ ವಿಚಾರವನ್ನ ಹೇಳೋಕೆ ಗಟ್ಟಿಮನಸ್ಸು ಮಾಡಿಕೊಂಡು ಹೊರಟೇ ಬಿಟ್ಟಿದ್ದ. ಕೈಯಲ್ಲೊಂದು ಪ್ರೇಮಪತ್ರವನ್ನ ಅಚ್ಚುಕಟ್ಟಾಗಿ ಬರೆದು ಬಿಗಿಯಾಗೇ ಹಿಡಿದು ರಮ್ಯಾ ಬರುವ ಹಾದಿಯಲ್ಲೇ ಕಾದುಕುಳಿತಿದ್ದ. ತಣ್ಣನೆಯ ತಂಗಾಳಿ ಮನೋಹರನ ಕಿವಿಯಾಲೆಗಳನ್ನ ಸ್ಪರ್ಶಿಸಿದೊಡನೆ‌ ಪ್ರೇಮನಿವೇದನೆಯ ಗುಂಗಿನಲ್ಲಿದ್ದಂತೆಯೇ ದಡಬಡನೆ ಎದ್ದು ಕುಳಿತ ಮನೋಹರ ಹಿಂತಿರುಗಿ ನೋಡುನೋಡುತ್ತಿದ್ದಂತೆ ರಮ್ಯಾ ಪಕ್ಕದಲ್ಲೇ ಹಾದುಹೋಗಿದ್ದಳು. ರಮ್ಯಾ ನಿಲ್ಲು ಅಲ್ಲೇ ಅನ್ನೋಕೂ ಮುಂಚೆ ಮನೆಯ ಚಾವಣಿಯಲ್ಲಿ ಕೂತ ಆತನ ತಾಯಿ ಲೇ ಮನೋಹರ ಗದ್ದೆಯಲ್ಲಿ ಕಟ್ಟಿರೋ ಹಸೂನಾ ಹಟ್ಟಿಗೆ ತಂದು ಕಟ್ಟಪ್ಪಾ ಹಾಲು ಕರೀಬೇಕು ಬೇಗ ಬೇಗ ಅಂತ ಕಟ್ಟಪ್ಪಣೆಯನ್ನ ಹೊರಡಿಸಿಯೇ ಬಿಟ್ಟಿದ್ದರು. ಅಯ್ಯೋ ದುರ್ವಿಧಿಯೇ ಅಂತ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ವಲ್ಲಾ ಅಂದ್ಕೊಂಡೇ ಹಸುವಿಗೊಂದೇಟು ಬಲವಾಗೇ ಬಾರಿಸಿ ಹಟ್ಟಿಗೆ ತಂದು ಕಟ್ಟಿ ಬಾಳೇ ಬರಿದಾದಂತೆ ಪೇಚುಮೋರೆಯನ್ನ ಹಾಕಿಕೊಂಡು ಕೂತುಬಿಟ್ಟಿದ್ದ. ಇದೇ ರೀತಿ ಮನೋಹರ ರಮ್ಯಾಳ‌ ಬಳಿ ತನ್ನ ಪ್ರೀತಿಯ ಪರಿಯನ್ನ ವ್ಯಕ್ತಪಡಿಸೋಕೆ ನಾನಾ ರೀತಿಯಲ್ಲಿ ಹೇಳೋಕೆ ಅದೆಷ್ಟೋ ಬಾರಿ ಅಲೆಕ್ಸಾಂಡರ್ ‌ದಂಡಯಾತ್ರೆ ಮಾಡಿದಂತೆ ಹೋಗಿ ಅಡ್ಡಿಆತಂಕದಲ್ಲೇ‌ ಮನೆಯ‌ ಮೂಲೆ ಸೇರಿ ಕಣ್ಣಿರಿಟ್ಟಿದ್ದು ಮನೋಹರನ ಟ್ರ್ಯಾಕ್ ರೆಕಾರ್ಡ್ ನಲ್ಲಿ ಲೆಕ್ಕವಿಲ್ಲ‌. ಇಂದಲ್ಲಾ‌ ನಾಳೆ‌ ರಮ್ಯಾ ತನ್ನ ಪ್ರೇಮಾಂತರಾಳದ ಕಕ್ಷೆಯಲ್ಲೇ ಸುತ್ತುತ್ತಾಳೆ ಅಂತ ಭಾವಿಸಿ ಸಮಾಧಾನವನ್ನ ತೆಗೆದುಕೊಳ್ತಿದ್ದ ಮನೋಹರ. ಆದರೆ, ಕೆಲ ದಿನಗಳ ಹಿಂದಷ್ಟೇ ರಮ್ಯಾ ಗದ್ದೆಯ ಭಾಗದಲ್ಲಿ ಓಡಾಡೋದನ್ನೇ ನಿಲ್ಲಿಸಿಬಿಟ್ಟಿದ್ದಳು. ಯಾವಾಗ ರಮ್ಯಾ ತನ್ನ‌ ಪ್ರೀತಿಯ ಕಂಗಳ ಅಂಗಳದಿಂದ ಜಾರಿಹೋದಳೋ ಆಗಲೇ‌ ಮನೋಹರ ಕೂತಲ್ಲಿ ಕೂರೋಕಾಗದೇ ನಿಂತಲ್ಲಿ ನಿಲ್ಲೋಕೂ ಆಗದೇ ಚಡಪಡಿಸೋಕೆ ಶುರುಮಾಡಿದ್ದ. ಒಂದೆರಡು ದಿನ ಅದೇಗೋ ರಮ್ಯಾಳನ್ನ‌ ನೋಡದೇ ಇದ್ದುಬಿಟ್ಟಿದ್ದ ಮನೋಹರ ಮೂರನೇ‌ ದಿನ ಸೀದಾ ಸೀದಾ ರಮ್ಯಾಳ‌ ಮನೆಯ ಬಳಿ ಓಡೋಡಿ ಹೋಗಿದ್ದ.
ಅಷ್ಟೇ, ಮನೋಹರನ ಮೋಹಕ‌ ಹಕ್ಕಿ ರೆಕ್ಕೆ ಬಲಿತು ತವರುಮನೆಯನ್ನ ಬಿಟ್ಟು ಗಂಡನ ಮನೆಯ ಅಕ್ಕಿಬೆಲ್ಲದ ಸೇರನ್ನ ತುಳಿಯಲು ತುದಿಗಾಲಲ್ಲಿ ನಿಂತಿರೋ ವಿಚಾರ ಆತನ ಕಿವಿಗೆ ಬಿದ್ದಿತ್ತು. ರಮ್ಯಾಳ‌ ಮನೆಯ ಚಪ್ಪರವನ್ನ ಕೈಯಲ್ಲಿ ಸವರಿ ಪ್ರೀತಿಯ ನಿವೇದನೆಯನ್ನ ವೇದನೆ ಎಂದು ತಿಳಿದು ತಾಳಿದ ಹೊತ್ತಿಗೆ ತಾಳಿಯೇ ಬೇರೊಬ್ಬನ ಪಾಲಾಯ್ತಾ ಅನ್ನೋ ಫಿಲಿಂಗಲ್ಲೇ‌ ಮನೋಹರ ಕಣ್ಣೀರಿಟ್ಟಿದ್ದ. ತಾನು ಅಳೋದನ್ನ ಅವರಿವರು ನೋಡಿ ನಕ್ಕೇ ಬಿಟ್ಟಾರು ಅಂತ ತಡಬಡ‌ಮಾಡದೇ ತೋಳಿನ ಶರಟಿಂದಲೇ‌‌ ಕಣ್ಣನ್ನ ಒರಿಸಿಕೊಂಡು ಊರಾಚೆಗೆ ಓಡಿದ್ದ. ಪಕ್ಕದಲ್ಲೇ ಇದ್ದ ಮರವನ್ನ ಗಟ್ಟಿಯಾಗಿ ತಬ್ಬಿಕೊಂಡು ರಮ್ಯಾ ನೀನಿಲ್ಲದೇ ನಾನು ಹೇಗಿರಲಿ, ಹಾಳಾದ ಒಂದ್ ಸೈಡ್ ಲವ್ ಸ್ಟೋರಿ ಹಾಳಾದ್ ಮನೆಗೆ ನನ್ನ ಹುಡುಗೀನ ಸೊಸೆಯಾಗಿ ಮಾಡ್ಬಿಡ್ತು ಅಂತ ಹಲಬೋಕೆ ಮನೋಹರ ಶುರುಮಾಡಿದ್ದ. ಅಷ್ಟರಲ್ಲಾಗ್ಲೇ‌ ನವಿಲೂರಿನ ಗುಣವಂತೆ ಶೀಲಾ ದಾರಿಯಲ್ಲಿ ನಡೆದೋಗುತ್ತಿರೋದು ಮನೋಹರನ ಕಣ್ಣಿಗೆ ಬಿದ್ದಿತ್ತು.

ಶೀಲಾಳ ನಡಿಗೆಯ ನೋಟ ಮೈಮಾಟ ನೋಡುನೋಡುತ್ತಿದ್ದಂತೆ ರಮ್ಯಾಳ ಪ್ರೀತಿಯ ಗುಂಗು ಹಾರಿಹೋಗಿ ಶೀಲಾಳ ನಡಿಗೆಯ ಭಂಗಿಗಳೇ ಕಣ್ಣಪರದೆಯ ಮೇಲೆ‌ ಮೂಡೋಕೆ ಶುರುವಾಯ್ತು. ಮತ್ತದೇ ಕಿಂಡಿ-ಹಾಳೆಯಾ ಪ್ರೀತಿ ಮನೋಹರನ ಮನೆಯ ಮೋರೆಯಲ್ಲೇ ತೂಗಾಡೋಕೆ ಶುರುವಾಯ್ತು.
ಒನ್ ವೇ ಲವ್ ಸ್ಟೋರಿ ಮತ್ತೆ ಪ್ರಾರಂಭ

ದತ್ತರಾಜ್ ಪಡುಕೋಣೆ

Similar Articles

Top
error: Content is protected !!